      ಚಿತ್ರ ಸೇರಿಸಬೇಕಿದೆ 
ಏತ: ನೀರಿನ ಮಟ್ಟ ನೆಲಮಟ್ಟಕ್ಕೆ ಆದಷ್ಟು ಸಮೀಪವಿರುವ ಬಾವಿ, ಹೊಳೆ ಮುಂತಾದ ಮೂಲಗಳಿಂದ ನೀರನ್ನೆತ್ತಿ ಪಕ್ಕದ ಹೊಲಗಳಿಗೆ ಮೊಗೆಯುವ ಒಂದು ಸಾಧನ. ಎತ್ತಬೇಕಾದ ಎತ್ತರ 30 ಮೀಗಳಿಗಿಂತ ಕಡಿಮೆಯಿದ್ದರೆ ಮಾತ್ರ ಏತ ಉಪಯುಕ್ತ. ಏತಗಳಲ್ಲಿ ಎರಡು ವಿಧ- ಮನುಷ್ಯಚಾಲಿತ ಮತ್ತು ಪಶುಚಾಲಿತ. ಮೊದಲಿನದರಲ್ಲಿ ಬಾನೆ(ನೀರನ್ನು ತುಂಬುವ ಸಾಧನ)ಯನ್ನು ಕೆಳಗಿಳಿಸುವ ಮತ್ತು ಮೇಲೆತ್ತುವ ಕೆಲಸಗಳನ್ನು ಮನುಷ್ಯನೇ ಮಾಡಿದರೆ, ಎರಡನೆಯ ವಿಧದÀಲ್ಲಿ ಪಶುಗಳು ಈ ಕೆಲಸ ಮಾಡುತ್ತವೆ. ಮನುಷ್ಯ ಪಶುಗಳ ಚಲನೆಯನ್ನು 
ನಿಯಂತ್ರಿಸುತ್ತಾನೆ.

 ಮನುಷ್ಯ ಚಾಲಿತ ಏತ 
ಇದನ್ನು ಕೆಲವೆಡೆ ‘ಡೆಂಕ್ಲಿ’ ಎನ್ನುತ್ತಾರೆ. ಸಾಮಾನ್ಯವಾಗಿ ನೀರಿನ ಮಟ್ಟ ನೆಲಮಟ್ಟದಿಂದ 15 ಮೀಟರುಗಳಿಗಿಂತ ಕಡಿಮೆ ಇರುವ ಬಾವಿ ಅಥವಾ ಕೆರೆಗಳಿಂದ ನೀರನ್ನೆತ್ತ್ತಿ ಸಣ್ಣ ಪುಟ್ಟ ಹೊಲಗಳಿಗೆ ಪುರೈಸಲು ಇದು ಉಪಯುಕ್ತ. ಇಂಥ ಏತದ ಚಿತ್ರ ಇಲ್ಲಿದೆ. ಬಾವಿಯ ಪಕ್ಕದಲ್ಲಿ ನೇರವಾದ ಒಂದು ಕಂಬ ನೆಟ್ಟು, ಅದರ ತುದಿಗೆ ಮೇಲೆ, ಕೆಳಗೆ ಓಲಾಡುವ ಒಂದು ಬಲವಾದ ಸನ್ನೆಕೋಲನ್ನಿರಿಸುತ್ತಾರೆ. ಕೋಲಿನ ಅರ್ಧಭಾಗ ಬಾವಿಯ ಒಳಕ್ಕೆ ಇನ್ನರ್ಧಭಾಗ ಬಾವಿಯಿಂದ ಹೊರಕ್ಕೆ ಚಾಚಿರುತ್ತದೆ. ಬಾವಿಯೊಳಕ್ಕೆ ಚಾಚಿರುವ ಅರ್ಧಭಾಗದ ತುದಿಗೆ ಒಂದು ಹಗ್ಗ ಕಟ್ಟಿ ಬಾನೆಯನ್ನು ಇದರ ತುದಿಗೆ ಕಟ್ಟಲಾಗುವುದು. ಸನ್ನೆಕೋಲಿನ ಇನ್ನೊಂದು ತುದಿಯಲ್ಲಿ ಸಮಭಾರದ ಒಂದು ಕಲ್ಲನ್ನು ಪ್ರತಿಭಾರವಾಗಿ ಕಟ್ಟಿರುತ್ತಾರೆ. ಬಾನೆಯನ್ನು ನೀರಿನಲ್ಲಿ ಮುಳುಗಿಸಲು ಅದಕ್ಕೆ ಆಧಾರವಾದ ಹಗ್ಗವನ್ನು ಕೆಲಸಗಾರ ಕೆಳಗಿಳಿಸುತ್ತಾನೆ. ಅದರಲ್ಲಿ ನೀರು ಪುರ್ತಿಯಾಗಿ ತುಂಬಿದ ಬಳಿಕ ಬಾನೆಯನ್ನು ನೇರವಾಗಿ ಮೇಲೆತ್ತುತ್ತಾನೆ. ಸನ್ನೆಕೋಲಿನ ಇನ್ನೊಂದು ಕೊನೆಗೆ ಪ್ರತಿಭಾರವಿರುವುದರಿಂದ ಬಾನೆ ಮನುಷ್ಯ ಶಕ್ತಿಯ ಸಹಾಯವಿಲ್ಲದೆ ಮೇಲೇರುತ್ತದೆ. ಖಾಲಿ ಬಾನೆಯನ್ನು ಕೆಳಗಿಳಿಸಲು ಮಾತ್ರ ಆತ ಅಲ್ಪಶಕ್ತಿಯನ್ನು ಉಪಯೋಗಿಸಿದರೆ ಸಾಕು. ಮೇಲೇರುವ ಬಾನೆ ಬಾವಿಯ ಅಂಚಿಗೆ ತಗುಲಿ ನೀರು ಚೆಲ್ಲದಂತೆ ಎಚ್ಚರವಹಿಸಬೇಕು.

 ಪಶುಚಾಲಿತ ಏತ 
ಇದನ್ನು ಬಳಸಿ ನೆಲದಿಂದ ಸುಮಾರು 30 ಮೀನಷ್ಟು ಆಳದಲ್ಲಿರುವ ನೀರನ್ನು ಮೇಲೆತ್ತಬಹುದು. ಇಂಥ ಬಾವಿಗಳಿಗೆ ಕಪಿಲೆ ಬಾವಿಗಳೆಂದು ಹೆಸರು. ಚಿತ್ರದಲ್ಲಿ ಒಂದು ಪಶುಚಾಲಿತ ಏತವನ್ನು ತೋರಿಸಿದೆ. ಇದರಲ್ಲಿ ನೀರನ್ನು ತುಂಬಿ ಮೇಲೆತ್ತಲು ಒಂದು ದೊಡ್ಡ ಚರ್ಮದ ಚೀಲ ಅಗತ್ಯ. ಚೀಲದ ಒಂದು ತುದಿಯಲ್ಲಿ ದೊಡ್ಡದಾದ ಒಂದು ರಂಧ್ರ ಇನ್ನೊಂದು ತುದಿಯಲ್ಲಿ ಒಂದು ಸಣ್ಣ ರಂಧ್ರ ಇವೆ. ಉದ್ದವಾದ ಹಗ್ಗದ ಒಂದು ತುದಿಯನ್ನು ದೊಡ್ಡ ರಂಧ್ರದ ಬಳಿ ಚೀಲಕ್ಕೆ ಕಟ್ಟಿ, ಈ ಹಗ್ಗವನ್ನು ಬಾವಿಯ ಮೇಲ್ಭಾಗದ ರಾಟೆಯ ಮೂಲಕ ಹಾಯಿಸಿ ಎತ್ತುಗಳ ನೊಗಕ್ಕೆ ಕಟ್ಟಬೇಕು. ಮತ್ತೊಂದು ಹಗ್ಗದ ಒಂದು ತುದಿಯನ್ನು ಚರ್ಮದ ಚೀಲದ ಚಿಕ್ಕ ರಂಧ್ರದ ಬಳಿ ಕಟ್ಟಿ ಅದನ್ನು ಬಾವಿಯ ಮೇಲ್ಭಾಗದ ಎರಡನೆಯ ರಾಟೆಯ ಮೂಲಕ ಹಾಯಿಸಿ ಎತ್ತುಗಳ ನೊಗಕ್ಕೆ ಕಟ್ಟಬೇಕು. ಬಾವಿಯಿಂದ ಸ್ವಲ್ಪ ದೂರದವರೆಗೆ ಎತ್ತುಗಳ ಚಲನೆಗೆ ಒಂದು ಇಳಿಜಾರಿನ ದಾರಿಯನ್ನು ಮಾಡುತ್ತಾರೆ. ನೀರನ್ನೆಳೆಯುವ ಎತ್ತುಗಳು ಇಳಿಜಾರು ದಾರಿಯಲ್ಲಿ ಮುಂದಕ್ಕೆ ಮತ್ತು ಹಿಂದಕ್ಕೆ ಚಲಿಸುತ್ತವೆ. ಚೀಲಕ್ಕೆ ಕಟ್ಟಿದ ಹಗ್ಗಗಳು, ಎತ್ತುಗಳು ಬಾವಿಯ ಬಳಿಯಿದ್ದಾಗ ಚರ್ಮದ ಚೀಲ ಪುರ್ತಿಯಾಗಿ ನೀರಿನಲ್ಲಿ ಮುಳುಗುವಷ್ಟು ಉದ್ದವಾಗಿರಬೇಕು. ಚೀಲದೊಳಗೆ ನೀರು ಪುರ್ತಿಯಾಗಿ ತುಂಬಿದೊಡನೆ ಎತ್ತುಗಳು ಇಳಿಜಾರು ದಾರಿಯಲ್ಲಿ ಬಾವಿಯಿಂದ ದೂರಕ್ಕೆ ಚಲಿಸುತ್ತವೆ. ಅವು ಮುಂದಕ್ಕೆ ಚಲಿಸಿದಂತೆ ನೀರಿನಿಂದ ತುಂಬಿದ ಚೀಲ ಮೇಲೇರುತ್ತದೆ. ಆಗ ಅದರ ಎರಡೂ ರಂಧ್ರಗಳು ಚಿತ್ರದಲ್ಲಿ ತೋರಿಸಿದಂತೆ ಮೇಲಕ್ಕೆ ಬರುವುದರಿಂದ ನೀರು ಚೀಲದಿಂದ ಸೋರಿಹೋಗುವುದಿಲ್ಲ. ಎತ್ತುಗಳು ಇಳಿಜಾರಿನ ಕೊನೆ ತಲುಪಿದಾಗ ಚೀಲ ಸಂಪುರ್ಣವಾಗಿ ಬಾವಿಯಿಂದ ಮೇಲೆ ಬಂದಿರುತ್ತದೆ. ಆಗ ಚೀಲದ ಸಣ್ಣ ತೂತಿನ ಮೂಲಕ ನೀರು ಬಾವಿಯ ಅಂಚಿನ ಮೇಲಿರುವ ತೊಟ್ಟಿಗೆ ಸುರಿಯುವುದು. ಅಲ್ಲಿಂದ ನೀರನ್ನು ಹೊಲಗಳಿಗೆ ಹರಿಯಬಿಡುತ್ತಾರೆ. (ಕೆ.ಸಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ